ನ್ಯೂಜ್ ಡೆಸ್ಕ್: ಚಾಮರಾಜನಗರದ ಸರಕಾರಿ ಆಸ್ಪತ್ರೆಯಲ್ಲಿ ಸಂಭವಿಸಿರುವ ಸಾವುಗಳು ನಿಮ್ಮ ಮನಸ್ಸಿನ ಮೇಲೆ ಯಾವುದೇ ರೀತಿಯ್ ಪರಿಣಾಮ ಬೀರಲಿಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪನವರೆ ಒಂದು ಕ್ಷಣ ಕಾಲ ನಿಮ್ಮ ಸ್ಥಾನವನ್ನು ಮರೆತು ಒಬ್ಬ ಸಾಮಾನ್ಯ ಮಾನವರಾಗಿ ಆಲೋಚಿಸಿ ನೋಡಿ ಎಂದು ಮಾಜಿ ಸ್ಪೀಕರ್ ಹಾಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.
ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ರಮೇಶ್ ಕುಮಾರ್ ಬಹಿರಂಗ ಪತ್ರ ಬರೆದಿದ್ದು .ನಾವು ಅಲಂಕರಿಸಿರುವ ಸ್ಥಾನಗಳು ನಮ್ಮ ಮನುಷ್ಯತ್ವಕ್ಕೆ ಹೊದಿಸಿದ ಕವಚಗಳೇ ಹೊರತು ನಮ್ಮ ಸೂಕ್ಷ್ಮತೆಯನ್ನು ನುಂಗಿಹಾಕುವ ಸಾಧನಗಳಾಗಬಾರದು ಎಂದು ತೀಕ್ಷಣವಾಗಿ ಹೇಳಿದ್ದಾರೆ.
ಶಾಸಕನಾಗಿ ಅಥಾವ ವಿಶೇಷವಾಗಿ ಪ್ರತಿಪಕ್ಷದನಾಗಿ ಈ ಮಾತುಗಳನ್ನಾಡುತ್ತಿಲ್ಲ. ರಾಜಕಾರಣ ತನ್ನ ಗಾಂಭೀರ್ಯವನ್ನು ಮತ್ತು ಘನತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಕೆಲವೇ ದಿನಗಳ ಹಿಂದೆ ಮದ್ರಾಸ್ ಶ್ರೇಷ್ಠ ನ್ಯಾಯಾಲಯವು ಕೇಂದ್ರ ಚುನಾವಣಾ ಆಯೋಗದ ಕರ್ತವ್ಯ ಭ್ರಷ್ಟತೆಯ ಬಗ್ಗೆ ಆಡಿರುವ ನಿಷ್ಠುರದ ಮಾತುಗಳನ್ನು ತಾವು ಗಮನಿಸಿರಬಹುದು ಎಂದು ನಂಬಿದ್ದೇನೆ. ಇದರ ಹಿನ್ನೆಲೆಯಲ್ಲಿ ನಡೆದಿರುವ ದುರಂತ ಏನೆಂದು ನಮಗೆ ಸೂಚನೆ ಕೊಡುತ್ತೆ ಎಂದು ಅವರು ವಿವರಿಸಿದ್ದಾರೆ.
ಪ್ರಾಣ ಕಳೆದುಕೊಂಡಂಥವರು, ಸಮರದಲ್ಲಿ ಸಾವನ್ನಪ್ಪಿದ ವೀರಯೋಧರಲ್ಲ ಅಥವಾ ಯಾವುದೇ ಸತ್ಯಾಗ್ರಹ ಅಥವಾ ಹೋರಾಟಕ್ಕಾಗಿ ಮಡಿದ ಹುತಾತ್ಮರೂ ಅಲ್ಲ, ಮಹಾತ್ಮರೂ ಅಲ್ಲ. ಆರೋಗ್ಯ ಬಿಗಡಾಯಿಸಿ ಅಸಹಾಯಕರಾಗಿ ಜೀವ ಅಂಗೈನಲ್ಲಿ ಇಟ್ಟುಕೊಂಡು ಪ್ರಾಣ ಉಳಿಸಿ ಕೊಳ್ಳಬೇಕೆಂಬ ಒಂದೇ ಅಪೇಕ್ಷೆಯಿಂದ ಸರಕಾರಿ ಆಸ್ಪತ್ರೆಗೆ ಬಂದ ಸಾಮಾನ್ಯ ಜನತೆ ಎನ್ನುವುದು ಕಟುಸತ್ಯ. ಇದುವರೆವಿಗೆ ಬಂದ ವರ್ತಮಾನದ ಪ್ರಕಾರ ಆಸ್ಪತ್ರೆಯಲ್ಲಿ ಇದ್ದ ವೈಫಲ್ಯಗಳ ಕಾರಣದಿಂದ ಇವರು ಪ್ರಾಣ ಕಳೆದುಕೊಂಡಿದ್ದಾರೆ. ಸತ್ತವರು ಸಾಮಾನ್ಯ ಜನ, ಸತ್ತಿದ್ದು ಸರಕಾರಿ ಆಸ್ಪತ್ರೆಯಲ್ಲಿ. ಆದಕ್ಕೆ ಕಾರಣ ನಮ್ಮ ದಿವ್ಯ ನಿರ್ಲಕ್ಷ್ಯ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಹಾರಿಹೋದ ಪ್ರಾಣ ಪಕ್ಷಿಗಳ ಕುಟುಂಬಗಳ ಅವಲಂಬಿತರು ಅಥವಾ ಬಂಧುಬಳಗದವರು ದುಃಖದ ಮಡುವಿನಲ್ಲಿ ಬಿದ್ದಿದ್ದಾರೆ ಎಂದು ಆಲೋಚನೆ ಮಾಡುವಂತ ಪ್ರಯತ್ನವನ್ನಾದರೂ ನೀವು ಮಾಡಿದ್ದೀರಾ? ಯಾರ ತಪ್ಪಿಗಾಗಿ ಯಾರಿಗೆ ಶಿಕ್ಷೆ? ಯಾರ ದರ್ಪ ಮತ್ತು ಅಹಂಕಾರಗಳಿಗೆ ಯಾರು ಬಲಿಯಾಗಿದ್ದಾರೆ? ಆಲೋಸಿದ್ದಿರಾ? ಎಂದು ಮುಖ್ಯಂತ್ರಿಯನ್ನು ಪ್ರಶ್ನಿಸಿದ್ದಾರೆ.
ಸತ್ತ ಕುಟುಂಬಗಳಿಗೆ ಒಂದು ವೇಳೆ ನೀವು ಘೋಷಿಸಬಹುದಾದ ಪರಿಹಾರ ಮೌಲಿಕವಾಗಿ ಯಾವ ಯೋಗ್ಯತೆ ಉಳ್ಳದ್ದಾಗಿರುತ್ತದೆ? ಅಸಹಾಯಕ ಜನರ ಜೀವಕ್ಕೆ ಬೆಲೆ ಕಟ್ಟುವ ಒಂದು ದುರಹಂಕಾರದ ಪರಮಾವಧಿಯ ಪ್ರಕ್ರಿಯೆಯಾಗುತ್ತದೆಯೇ ಹೊರತು ಪಶ್ಚಾತ್ತಾಪದ ಮನಸ್ಸಿನಿಂದ,ಪ್ರಾಮಾಣಿಕವಾದ ಪ್ರಯತ್ನ ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
80ರ ಪ್ರಾಯದಲ್ಲಿರುವ ತಮಗೆ, 71-72 ರ ಪ್ರಾಯದಲ್ಲಿರುವ ನನಗೆ ಬದುಕಿರಲೇಬೇಕೆಂಬ ದೃಢನಿಶ್ಚಯವಿದೆ ಮತ್ತು ನಮ್ಮನ್ನು ಉಳಿಸಿಕೊಳ್ಳಲು ವ್ಯವಸ್ಥೆಯೂ ಇದೆ. ಆದರೆ ನಮ್ಮನ್ನು ಈ ಸ್ಥಾನಗಳಿಗೆ ತಂದ ಜನರ ಜೀವ ಉಳಿಸಲು ವ್ಯವಸ್ಥೆ ಪೂರಕವಾಗಿಲ್ಲ. ಔಪಚಾರಿಕವಾಗಿ ಎಲ್ಲ ಬೆಲೆಯನ್ನು ಕಳೆದುಕೊಂಡಿರುವ ರಾಜಕೀಯ ಭಾಷೆಯಲ್ಲಿ ನೀವು ರಾಜೀನಾಮೆಯನ್ನು ಕೊಡಿ ಎಂದು ಕೇಳುವ ಮೂರ್ಖ ನಾನಲ್ಲ ಎಂದು ಅವರು ಹೇಳಿಸಿದ್ದಾರೆ.
ಒಂದು ವೇಳೆ ನೀವು ಅಂತಹ ನಿರ್ಧಾರ ಮಾಡಿದರೂ ಸತ್ತವರೇನೂ ಬದುಕಿ ಬರುವುದಿಲ್ಲ ಅಥವಾ ಪರಿಸ್ಥಿತಿಯೂ ಸುಧಾರಣೆಯಾಗುವುದಿಲ್ಲ.ಅದೊಂದು ರಾಜಕೀಯ ಮೇಲಾಟ ಮಾತ್ರ ಆಗುತ್ತದೆ. ನಾವು ಪ್ರಾಣಿ ಪ್ರಪಂಚದಿಂದ ವಿಭಿನ್ನವಾಗಿ ಮನುಷ್ಯ ಲೋಕದಲ್ಲಿ ಇದ್ದೇವೆ. ನಾಗರಿಕ ಸಮಾಜವೆಂದು ಜಂಭ ಕೊಚ್ಚಿಕೊಳ್ಳುತ್ತೇವೆ.ಅಳಲು,ದುಃಖ ದುಮ್ಮಾನಗಳನ್ನು ತೋಡಿಕೊಳ್ಳಲು ಪ್ರಾಣಿಗಳಿಗೆ ಅವಕಾಶವಿಲ್ಲ ನಾವು ಮಾನವರಾದ ನಮಗೆ ಅಂತಹ ಅವಕಾಶ ಇದೆ ಎಂದಿರುತ್ತಾರೆ.
ಆ ಪ್ರಾಣಿ ಅನುಭವಿಸುವ ನೋವು ಮೂಕವೇದನೆ. ಇಂದು ನಮ್ಮೆಲ್ಲರ ಬೇಜವಾಬ್ದಾರಿಯಿಂದ ನಾಗರಿಕ ಸಮಾಜ ಪ್ರಾಣಿಗಳ ರೀತಿಯಲ್ಲೇ ಮೂಕ ವೇದನೆಯನ್ನು ಅನುಭವಿಸುತ್ತಿದೆ. ಮನುಷ್ಯನಿಗೆ ಪಂಚೇಂದ್ರಿಯಗಳು ನಿಷ್ಕ್ರಿಯವಾದ ಮೇಲೆ ಅಂತಹ ಮನುಷ್ಯ ಸಮಾಜಕ್ಕೆ ಹೆಚ್ಚು ಉಪಯುಕ್ತನಾಗುವುದಿಲ್ಲ. ಪಂಚೇಂದ್ರಿಯಗಳು ಸಕ್ರಿಯವಾಗಿರುವ ಮನುಷ್ಯನಿಗೆ ಇಂತಹ ಸನ್ನಿವೇಶದಲ್ಲಿ ನಿರ್ಜೀವ ಹೆಣದಂತೆ ಬಿದ್ದಿರಲೂ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ನನ್ನನ್ನು ಒಳಗೊಂಡು ನಾವೆಲ್ಲರೂ ಈ ದುರಂತಕ್ಕೆ ಕಾರಣರಾಗಿದ್ದೇವೆ. ಸತ್ತ ಸಂಬಂಧಿಕರ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಬರಲು ಹಣ ಇಲ್ಲದೆ ಸಂಬಂಧಿಕರು ಆ ಶವವನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ. ಇದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಇದು ನಮಗೆ ಮತ್ತು ನನಗೆ ಇದರ ಸಂಬಂಧವಿಲ್ಲದವರಂತೆ ನಾವು ವರ್ತಿಸಿದ್ಧೇವೆ. ಹೆಮ್ಮಾರಿಗೆ ಬಲಿಯಾಗಿ ಗತಿಸಿ ಹೋದವರ ದಹನಕ್ರಿಯೆಗೆ ಜನ ಪರದಾಡುತ್ತಿದ್ದಾರೆ, ಆದರೂ ನಮ್ಮದೊಂದು ಸಂವಿಧಾನಬದ್ಧವಾಗಿ ಸ್ಥಾಪಿತವಾದ ಜವಾಬ್ದಾರಿಯುತ ನಾಗರಿಕ ಸರಕಾರ. ಎಂತಹ ವಿಪರ್ಯಾಸ ಎಂದು ಅವರು ವಿಷಾಧಿಸಿದ್ದಾರೆ.
ಆಸ್ಪತ್ರೆ ಸಿಗುವುದು ದುರ್ಲಭ, ಹೋದ ಆಸ್ಪತ್ರೆಯಲ್ಲಿ ಆಮ್ಲಜನಕದ ಲಭ್ಯತೆ ಆಸ್ಪತ್ರೆಯ ಜವಾಬ್ದಾರಿಯಲ್ಲ. ಕೃತಕ ಉಸಿರಾಟದ ಯಂತ್ರಗಳು ನಮಗೆ ಸಂಬಂಧವೇ ಇಲ್ಲ. ಭಾರತ ದೇಶದ ಸರ್ವೋಚ್ಚ ನ್ಯಾಯಾಲಯ ದಿಲ್ಲಿ ನಗರವಾಸಿಗಳಿಗೆ ಆಮ್ಲಜನಕ ಪೂರೈಕೆ ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ನೀಡಿರುವ ಸೂಚನೆ ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ಎಂದಿರುವ ರಮೇಶ್ ಕುಮಾರ್ ಜೀವನದಲ್ಲಿ ಒಂದು ಆಸೆ, ತಾನೇನಾದರೂ ಸಾಧಿಸಬೇಕೆಂಬುದು. ತಮಗೆ ಇನ್ನೇನು ಜೀವನದಲ್ಲಿ ಆಗಬೇಕೆಂಬ ಆಸೆ ಉಳಿದಿದೆ? ಒಂದು ವೇಳೆ ಇದೇ ಸ್ಥಿತಿಯಲ್ಲಿ ಮುಂದುವರೆಯಬೇಕೆಂದು ಇದ್ದರೆ ಯಾವ ಪುರುಷಾರ್ಥಕ್ಕಾಗಿ ಎಂದು ತಿಳಿದುಕೊಳ್ಳುವ ಕುತೂಹಲ ನನಗಿದೆ. ಈ ಮಾತು ನಿಮಗಷ್ಟೇ ಅಲ್ಲ ಸಾರ್ವಜನಿಕ ಜೀವನದಲ್ಲಿ ಇರುವ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಅನ್ವಯಿಸುತ್ತದೆ ಎಂದು ಅವರು ಹೇಳಿದ್ದಾರೆ.
ರಾಜಕೀಯ ಮುಖಂಡರುಗಳಾದ ನಾವು ಗಳಿಸಿರುವ ಭ್ರಷ್ಟಚಾರದ ಸಂಪಾದನೆ ನಮ್ಮ ಖಾಸಗಿ ಬದುಕಿನಲ್ಲಿ ಅಭದ್ರತೆಯನ್ನು ದೂರಮಾಡುತ್ತದೆ. ಹಾಗಾಗಿ ನಮ್ಮ ಹೊಸಲಿಂದಾಚೆಗಿರುವ ನೋವು ನಮ್ಮದಾಗಿರುವುದಿಲ್ಲ. ನಮಗೆ ಅರ್ಥವೂ ಆಗುವುದಿಲ್ಲ. ಆದುದರಿಂದ, ಇಂದು ನಡೆದಿರುವಂತಹ ಭೀಕರ ದುರಂತ ಸನ್ನಿವೇಶಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಾದ ನಮ್ಮ ಪ್ರತಿಕ್ರಿಯೆಗಳು ಅಸಹಜವಾಗಿರುತ್ತೆ, ನಾಟಕೀಯವಾಗಿರುತ್ತೆ. ಈ ನಾಟಕಕ್ಕೆ ಕೊನೆ ಎಂದು? ನಮ್ಮ ಪಂಚೇಂದ್ರಿಯಗಳು ಸಕ್ರಿಯವಾಗುತ್ತೋ ಅಂದು ನಾಟಕ ಅಂತ್ಯವಾಗುತ್ತದೆ ಎಂದಿರುತ್ತಾರೆ.
ಇಂತಹ ಅಗ್ನಿ ಪರೀಕ್ಷೆಯ ಸಮಯದಲ್ಲಿ ನಾಟಕ ಮುಂದುವರೆಯುತ್ತೋ ಅಥವಾ ಅಂತ್ಯವಾಗಿ ಪಂಚೇಂದ್ರಿಯಗಳು ಸಕ್ರಿಯವಾಗಿತ್ತೋ ಸಾಮಾನ್ಯ ಜನರಿಗೆ ಸಾಬೀತು ಮಾಡುವ ಹೊಣೆ ನಿಮ್ಮ ಮೇಲಿದೆ. ನನಗೆ ರಾಜಕೀಯ ಪೂರ್ವಗ್ರಹಪೀಡಿತ ಆಲೋಚನೆ ಯಾಗಲಿ ಅಥವಾ ಮತ್ತಾವುದೇ ದುರಾಲೋಚನೆಗಳು ಇರುವುದಿಲ್ಲ. ಇದು ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯುಂದ ಹಾಗು ಇತ್ತಿಚಿನ ದಿನಗಳಲ್ಲಿ ಜನತೆ ಅನುಭವಿಸುತ್ತಿರುವ ಯಾತನೆಯನ್ನು ನೋಡಿ ನೊಂದ ಮನಸ್ಸಿನ ಹೃದಯಾಂತರಾಳದ ಮಾತುಗಳು ನನ್ನಿಂದ ಹೋರಬಂದಿದೆ ನಾನು ಯಾವುದೇ ರೀತಿಯ ಆಶ್ಚರ್ಯಕರ ಪ್ರತಿಕ್ರಿಯೆಗಳು ಈ ಪತ್ರಕ್ಕೆ ಸಿಗುತ್ತದೆ ಎಂದು ವಿಶ್ವಾಸಿಸಿಲ್ಲ ಎಂದಿರುವ ಅವರು ಅದಕ್ಕೆ ಕಾರಣ ಸ್ಥಗಿತಗೊಂಡ ಪಂಚೇಂದ್ರಿಯಗಳು ಎಂದು ಪ್ರಸ್ತಾಪಿಸಿದ್ದಾರೆ.