ಬೆಂಗಳೂರು:ಶ್ರೀನಿವಾಸಪುರ ಮೂಲದವರಾದ ನ್ಯಾಯಮೂರ್ತಿ ಬಿ ವೀರಪ್ಪ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿದ್ದು ಈಗ ಅವರನ್ನು ಉಪಲೋಕಾಯುಕ್ತರನ್ನಾಗಿ ರಾಜ್ಯಪಾಲರು ಶುಕ್ರವಾರ ನೇಮಕ ಮಾಡಿ ಆದೇಶಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಸೆಕ್ಷನ್ 3(1)ರ ಅಡಿ ದೊರೆತಿರುವ ಅಧಿಕಾರ ಬಳಸಿ ನಿವೃತ್ತ ನ್ಯಾಯಮೂರ್ತಿ ವೀರಪ್ಪ ಅವರನ್ನು ಉಪಲೋಕಾಯುಕ್ತರನ್ನಾಗಿ ನೇಮಕ ಮಾಡಿರುವುದಾಗಿ ರಾಜ್ಯಪಾಲರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ, ವಿಧಾನಸಭೆ ಸ್ಪೀಕರ್, ಪರಿಷತ್ ಸಭಾಪತಿ ಮತ್ತು ವಿರೋಧ ಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೃತ್ತ ನ್ಯಾಯಮೂರ್ತಿ ವೀರಪ್ಪ ಅವರ ಹೆಸರನ್ನು ಉಪಲೋಕಾಯುಕ್ತರ ಹುದ್ದೆಗೆ ಶಿಫಾರಸ್ಸು ಮಾಡಿದ್ದಾರೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ರಾಜ್ಯದಲ್ಲಿ ಉಪ ಲೋಕಾಯುಕ್ತರ ಎರಡು ಹುದ್ದೆಗಳಿವೆ. 2022ರ ಜೂನ್ 14ರಂದು ಉಪ ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರನ್ನು ಲೋಕಾಯುಕ್ತ ಹುದ್ದೆಗೆ ಬಡ್ತಿ ನೀಡಿ, ಅಂದಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಅಂದಿನಿಂದಲೂ ಉಪ ಲೋಕಾಯುಕ್ತ ಹುದ್ದೆ ಖಾಲಿಯಾಗಿತ್ತು.
ಎರಡನೇ ಉಪ ಲೋಕಾಯುಕ್ತರ ಹುದ್ದೆ ಖಾಲಿಯಿದ್ದ ಕಾರಣ, ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊನೆಗೂ ಉಪಲೋಕಾಯುಕ್ತರನ್ನು ನೇಮಿಸಿದೆ.
ಶನಿವಾರ ಸಂಜೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತರಾದ ಬಿ.ವೀರಪ್ಪನವರಿಗೆ ಪದವಿಯ ಅಧಿಕಾರ ಪ್ರಮಾಣವಚನ ಬೋಧಿಸಿದರು. 2015ರಲ್ಲಿ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಬಿ.ವೀರಪ್ಪ ಅವರು, 2016-2023ರವರೆಗೆ ಹೈಕೋರ್ಟ್ನ ಕಾಯಂ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರವನ್ನು ರದ್ದುಗೊಳಿಸಿ, ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಪುನರ್ ಸ್ಥಾಪನೆ ಮಾಡಿದ ಹೆಗ್ಗಳಿಕೆ ವೀರಪ್ಪ ಅವರದ್ದಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತನಿಖೆಯ ಅಧಿಕಾರವನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಮರುಸ್ಥಾಪಿಸಿ ಐತಿಹಾಸಿಕ ತೀರ್ಪು ನೀಡಿದ್ದರು. ಬಿ.ವೀರಪ್ಪ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಾದ ಪಿಎಸ್ಐ ನೇಮಕಾತಿ ಹಗರಣದ ತನಿಖೆಗೆ ನೇಮಿಸಲಾಗಿದ್ದ ಆಯೋಗದ ಅಧ್ಯಕ್ಷರಾಗಿದ್ದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಾಯುಕ್ತ ನ್ಯಾಯಾಮೂರ್ತಿ ಬಿ.ಎಸ್.ಪಾಟೀಲ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಮತ್ತು ಬಿ.ವೀರಪ್ಪ ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿ ನಾಗದೇನಹಳ್ಳಿಯ ರೈತಾಪಿ ಕುಟುಂಬದಲ್ಲಿ ಜೂನ್ 1, 1961 ರಂದು ಜನಿಸಿದ ನ್ಯಾಯಮೂರ್ತಿ ವೀರಪ್ಪ ಶ್ರೀನಿವಾಸಪುರ ಪಟ್ಟಣದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(PWD ಕಚೇರಿ ಪಕ್ಕದಲ್ಲಿರುವ ಶಾಲೆ)ನಂತರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು ಶಿಕ್ಷಣ,ಮುಗಿಸಿ ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪದವಿ ಮತ್ತು ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ. ಮಾಡುತ್ತಾರೆ ನಂತರದಲ್ಲಿ ಕುಟುಂಬದ ಹಿರಿಯ ಮಗನಾಗಿ ಒಟ್ಟು ಕುಟುಂಬದ ಜವಾಬ್ದಾರಿ ಹೊತ್ತು 1988 ರಲ್ಲಿ ಬೆಂಗಳೂರಿನ ಹಿರಿಯ ವಕೀಲರಾದ ಪ್ರೊ.ಎಂ.ಎಸ್.ಗೋಪಾಲ್ ಅವರ ಬಳಿ ಸಹಾಯಕನಾಗಿ ವಕೀಲಿ ಜೀವನ ಶುರುಮಾಡಿದ ಅವರು ತಮ್ಮ ಕಠಿಣ ಪರಿಶ್ರಮದಿಂದ 27 ವರ್ಷಗಳ ಕಾಲ ವಕೀಲರಾಗಿ ದುಡಿಯುತ್ತಾರೆ, ಆನಂತರ 01.07.1995 ರಂದು ಸರ್ಕಾರಿ ವಕೀಲರಾಗಿ ನೇಮಕ ಮತ್ತು 15.09.2000 ರವರೆಗೆ ಮತ್ತು 25.05.2005 ರಂದು ಹೆಚ್ಚುವರಿ ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸುತ್ತಾರೆ. ಆನಂತರದಲ್ಲಿ ಕರ್ನಾಟಕದ ಹೈಕೊರ್ಟ್ ನ್ಯಾಯಮೂರ್ತಿಯಾಗಿ ಬಿ.ವೀರಪ್ಪನವರು ಸತತ 8ವರ್ಷ 5 ತಿಂಗಳ ಕಾಲ ಸೇವೆ ಸಲ್ಲಿಸಿದ ವೀರಪ್ಪನವರು, 2023ರ ಮೇ ತಿಂಗಳಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.
ಕೋಲಾರ ಜಿಲ್ಲೆಗೆ ಕೀರ್ತಿ ಹೆಚ್ಚಿಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು
ಈ ಹಿಂದೆ ಲೋಕಾಯುಕ್ತರಾಗಿದ್ದ ವೆಂಕಟಾಚಲಯ್ಯನವರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನವರು ಈಗ ಉಪಲೋಕಾಯುಕ್ತರಾಗಿರುವ ಬಿ.ವೀರಪ್ಪನವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದವರಾಗಿರುವುದು ವಿಶೇಷ ಎಂಬ ಮಾತು ಎಲ್ಲಡೆ ಕೇಳಿಬರುತ್ತಿದೆ.