ಶ್ರೀನಿವಾಸಪುರ:ಸರ್ಕಾರಿ ನೌಕರರ ಸಂಘದ ಸೋಮವಾರ ನಡೆದ ಶಿಕ್ಷಕರ ಕ್ಷೇತ್ರದ ಚುನಾವಣೆ ಯಾವುದೇ ಸಾರ್ವತ್ರಿಕ ಚುನಾವಣೆಗಳಿಗೂ ಕಡಿಮೆ ಇಲ್ಲದಂತೆ ಅಭ್ಯರ್ಥಿಗಳು ಮತದಾರರನ್ನು ನಾನಾ ರೀತಿಯಲ್ಲಿ ಕಸರತ್ತು ನಡೆಸಿ ಮತಯಾಚಿಸುತ್ತಿದ್ದರು.
ತಾಲೂಕಿನ 24 ಇಲಾಖೆ ವ್ಯಾಪ್ತಿಯಲ್ಲಿ 32 ಸ್ಥಾನಗಳಿಗೆ 27 ಸ್ಥಾನಗಳ ಅವಿರೋಧ ಅಯ್ಕೆಯಾಗಿದ್ದು ಇದರಲ್ಲಿ ಪ್ರಮುಖ ಇಲಾಖೆಗಳಾದ ಆರೋಗ್ಯ ಇಲಾಖೆಯಿಂದ 4 ಕಂದಾಯ ಇಲಾಖೆಯಲ್ಲಿ 3 ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 2 ಭೂಮಾಪನ ಇಲಾಖೆಯಲ್ಲಿ 2 ಸೇರಿದಂತೆ ಉಳಿದ ಎಲ್ಲಾ ಇಲಾಖೆಯಿಂದ ತಲಾ ಒಬ್ಬರು ಅಯ್ಕೆಯಾಗಿದ್ದಾರೆ. ಕೆಲ ಇಲಾಖೆಗಳಲ್ಲಿ ನೌಕರರು ಕನಿಷ್ಠ ಸಂಖ್ಯೆಯಲ್ಲೂ ಇಲ್ಲದ ಕಾರಣ ಕೆಲವೊಂದು ಇಲಾಖೆಗಳ ಜೋತೆ ಸೇರಿಸಿ ಪ್ರತಿನಿಧಿಗಳನ್ನು ಅಯ್ಕೆ ಮಾಡಿಕೊಳ್ಳಲಾಗಿದೆ.
ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ,ಪ್ರೌಢಶಾಲಾ ಶಿಕ್ಷಕರ ಸಂಘದ ಹಾಗು ಬಿಇಒ ಕಚೇರಿ ನೌಕರರ ಸಂಬಂದಿಸಿದಂತೆ ಅಭ್ಯರ್ಥಿಗಳು ಚುನಾವಣೆಗೆ ಮುಂದಾಗಿದ್ದು ಇದರಲ್ಲಿ ಪ್ರೌಡಶಾಲೆ ಶಿಕ್ಷಕರ ಕ್ಷೇತ್ರದಲ್ಲಿ 160 ಮತದಾರರಿದ್ದು ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರೆ,ಕ್ಷೇತ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ 14 ಮತದಾರಲ್ಲಿ ಒಮ್ಮತ ಇಲ್ಲದೆ ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು.


ಪ್ರಾಥಮಿಕ ಶಾಲಾ ಶಿಕ್ಷಕರದೆ ಸದ್ದು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ 677 ಮತದಾರರಿದ್ದು 9 ಜನ ಶಿಕ್ಷಕರು ಮೂರು ತಂಡಗಳಾಗಿ(ಪ್ಯಾನಲ್ ರಚಿಸಿಕೊಂಡು) ಅಭ್ಯರ್ಥಿಗಳಾಗಿ ಕಣದಲ್ಲಿದ್ದ ಹಿನ್ನಲೆಯಲ್ಲಿ ಚುನಾವಣೆ ವಾತವರಣ ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆ ಇಲ್ಲದಂತೆ ಗೆಲುವಿಗೆ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದರು. ಮತದಾನ ಕೇಂದ್ರದ ಸಮೀಪ ಪೆಂಡಾಲ್ ಹಾಕಿಕೊಂಡು ಕೂತಿದ್ದ ಅಭ್ಯರ್ಥಿಗಳು ಮತದಾನದ ಕೇಂದ್ರದವರಿಗೂ ಮತದಾರರ ಹಿಂದೆ ಹೋಗಿ ಮನವೊಲಿಸುವ ತೀವ್ರ ಪ್ರಯತ್ನ ನಡೆಸುತ್ತಿದ್ದು ಸಾಮಾನ್ಯವಾಗಿತ್ತು.ಇದು ಇಷ್ಟಕ್ಕೆ ನಿಂತಿರಲಿಲ್ಲ,ಮಹಾಲಕ್ಷ್ಮಿ ಯೋಗದೊಂದಿಗೆ ಧನಲಕ್ಷ್ಮಿ ಕೃಪೆ ತೊರಿಸುವಂತ ಕಾರ್ಯ ನಡೆಯುತಿತ್ತು.