ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಕೇಂದ್ರಿಕೃತವಾಗಿ ವಿಭಜಿತ ಕೋಲಾರ ಜಿಲ್ಲೆಯಲ್ಲಿ ಮಾವಿನ ಕಂಪು ಸೂಸುತ್ತಿದೆ.ಮೈತುಂಬ ಹೂ ತುಂಬಿಕೊಂಡಿದ್ದು ಮಾವಿನ ಮರಗಳು ಪ್ರಾಕೃತಿಕವಾಗಿ ಸುಂದರವಾಗಿ ಕಾಣ ಸಿಗುತ್ತಿದೆ ಇದು ಮಾವು ಬೆಳೆದ ರೈತರ ಮನದಲ್ಲೂ ಸಂತಸ ತುಂಬಿದ್ದು ಭರ್ಜರಿ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
ಶ್ರೀನಿವಾಸಪುರ ಎಂದರೆ ಮಾವಿನ ಮಡಿಲು ಎಂದೇ ಖ್ಯಾತಿ, ಇಲ್ಲಿ ಬೆಳೆಯುವ ಮಾವು ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಬೆಳೆಯುವಂತ ಬಾದಾಮಿ,ರಾಜಗೀರಾ, ಬೇನಿಷಾ, ನೀಲಂ, ತೋತಾಪುರಿ, ಸೇಂದೂರಾ/ರಸಪೂರಿ ಇನ್ನು ಹಲವು ತಳಿಯ ಮಾವಿನ ಹಣ್ಣುಗಳು ದೇಶದಾಚೆ ವಿದೇಶಗಳಿಗೆ ರಫ್ತಾಗುತ್ತಿದೆ ಈ ಭಾಗದ ಜನರ ಜೀವನಾಡಿಯಾಗಿರುವ ಮಾವು ರೈತರ ಬದುಕು ಹಸನಾಗಿಸಿತ್ತು.
ಭರ್ಜರಿ ಹೂ ಬಿಟ್ಟ ಮಾಮರ
ಕೆಲವೊಂದು ಮರಗಳಲ್ಲಿ ಎಲೆಗಳೇ ಕಾಣದ ರೀತಿಯಲ್ಲಿ ಹೂ ಬಿಟ್ಟಿರುವ ಕಾರಣ ಮಾವು ಬೆಳೆಗಾರರ ನಿರೀಕ್ಷೆ ಹೆಚ್ಚಾಗಿದೆ. ಕಳೆದ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಬಿದ್ದ ಮಳೆಯಿಂದ ಭೂಮಿ ತಂಪಾಗಿದೆ ಮಾವಿನ ಮರಗಳು ಫಲವತ್ತತೆ ಕಂಡಿರುವ ಹಿನ್ನಲೆಯಲ್ಲಿ ಮಾವಿನ ಮರ ಸೊಂಪಾಗಿ ಮೈತುಂಬ ಹೂ ಮುಡಿದು ನಿಂತಿವೆ. ವರ್ಷಕ್ಕೆ ಒಂದೇ ಬೆಳೆಯಾದರೂ ರೈತಾಪಿ ಕುಟುಂಬಗಳಿಗೆ ಬದುಕು ಕಟ್ಟಿಕೊಡುವಂತೆ ಮಾವುಬೆಳೆ ಇಲ್ಲಿನ ಮಾವುಬೆಳೆಗಾರನಿಗೆ ಆರ್ಥಿಕ ಹಾಗು ಸಾಮಾಜಿಕ ಭದ್ರತೆ ಒದಗಿಸಿದೆ.
ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಹೆಚ್ಚು ಮಳೆಯಾದ ಹಿನ್ನಲೆಯಲ್ಲಿ ಮಾವಿನ ಹೂಗಳು ರೋಗಗಳಿಗೆ ತುತ್ತಾಗಿ ಮಾವುಬೆಳೆಗಾರನ ವರ್ಷದ ಶ್ರಮ ಮಣ್ಣುಪಾಲಾಗಿತ್ತು. ಈ ಬಾರಿ ಹೂವು ಪೂರ್ಣಪ್ರಮಾಣದಲ್ಲಿ ಬಿಟ್ಟಿದ್ದು ಕಾಯಿ ಕಚ್ಚಿ ಅಷ್ಟೆ ಪ್ರಮಾಣದಲ್ಲಿ ಫಲ ನೀಡಿದರೆ ರೈತರ ಕುಟುಂಬಗಳ ಮೊಗದಲ್ಲಿ ಮಂದಹಾಸ ಹೊರ ಹೊಮ್ಮುತ್ತದೆ.
ಪ್ರಾಥಮಿಕ ಹಂತದಲ್ಲೇ ಸಂರಕ್ಷಿಸಿ
ಮುಖ್ಯವಾಗಿ ಹೂಬಿಡುವ ಅವಧಿಯಲ್ಲಿ ಜಿಗಿಹುಳ, ಥ್ರಿಪ್ಸ್, ಮೈಟ್ಸ್, ಹೂತೆನೆ ಕ್ಯಾಟರ್ ಪಿಲ್ಲರ್, ಹೂ ತೆನೆ ಕಪ್ಪಾಗುವ ರೋಗ, ಎಲೆ ಚಿಬ್ಬು ರೋಗ, ಬೂದಿ ರೋಗ, ಕಾಡಿಗೆ ರೋಗ ಸೇರಿದಂತೆ ಇತ್ಯಾದಿ ರೋಗಗಳು ಕಾಡುತ್ತವೆ.
ಈ ಹಂತದಲ್ಲಿ ಸರಿಯಾದ ಸಮಯಕ್ಕೆ ಹೂತೆನೆ ಮತ್ತು ಹೂಗಳಿಗೆ ಔಷಧಿಗಳನ್ನು ಸಿಂಪಡಣೆ ಮಾಡುವ ಮೂಲಕ ಮಾವಿನ ಹೂಗಳನ್ನು ಸಂರಕ್ಷಣೆ ಮಾಡಬಹುದು. ಮುಖ್ಯವಾಗಿ ಡೆಲ್ಟಾಮೆಥ್ರಿನ್ + ಹೆಕ್ಸಕೊನಜೋಲ್ ಅಥವಾ ಬೂಪ್ರೊಪೆಜಿನ್ + ಥೈಯೋಪನೈಟ್ ಮಿಥೈಲ್ ಅಥವಾ ಡಯಾಫೆಂತಿಯುರಾನ್ + ಡೈಫೆಂಕೊನಜಾಲ್ ಅಥವಾ ಅಜಾದಿರ್ಯಾಕ್ಟಿನ್ + ಡೈಫೆಂಕೊನಜಾಲ್ ಅಥವಾ ಇಂಡಾಕ್ಸಕಾರ್ಬ + ಟೆಬೊಕೋನಜಾಲ್ ಔಷಧಿಗಳನ್ನು ಸಿಂಪಡಿಸಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಬೆಳೆಗಾರರು ಇನ್ನು ವಿಭಜಿತ ಕೋಲಾರ ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ.