ನ್ಯೂಜ್ ಡೆಸ್ಕ್: ಕೋಲಾರದಲ್ಲಿರುವ ವಿಸ್ಟ್ರಾನ್ನ ಆಪಲ್ ಐಫೋನ್ ಉತ್ಪಾದನಾ ಘಟಕವನ್ನು ಕೊಳ್ಳುವ ಬಗ್ಗೆ ಟಾಟಾ ಗ್ರೂಪ್ ಜೊತೆಗೆ ಮಾತುಕತೆ ನಡೆಯುತ್ತಿದೆ ಎಂಬ ವರದಿ ಹೊರಬಂದಿದೆ.
ತೈವಾನ್ ಮೂಲದ ಆಪಲ್ ಫೋನ್ಗಳ ಪ್ರಮುಖ ಉತ್ಪಾದಕ ಸಂಸ್ಥೆ ವಿಸ್ಟ್ರಾನ್ ಕಾರ್ಪ್ ಕರ್ನಾಟಕದ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಘಟಕವನ್ನು ಕೊಳ್ಳುವ ಕುರಿತಾಗಿ ಟಾಟಾ ಗ್ರೂಪ್ ಮಾತುಕತೆ ನಡೆಸುತ್ತಿದೆ ಎಂದು ಭಾರತದ ಪ್ರಖ್ಯಾತ ವಾಣಿಜ್ಯ ಅಂಗ್ಲ ದಿನಪತ್ರಿಕೆಯಲ್ಲಿ ವರದಿ ಬಂದಿರುವುದಾಗಿ ಹೇಳಲಾಗಿದೆ.
ಈ ಘಟಕವನ್ನು ಸುಮಾರು 5,000 ಕೋಟಿ ರೂ.ಗೆ (612.6 ಮಿಲಿಯನ್ ಡಾಲರ್) ಖರೀದಿಸಲು ಮಾತುಕತೆ ನಡೆಯುತ್ತಿದೆ.
2017ರಲ್ಲಿ ಭಾರತದಲ್ಲಿ ಐಫೋನ್ಗಳನ್ನು ತಯಾರಿಸಲು ಪ್ರಾರಂಭಿಸಿತು. ಆಪಲ್, ದೇಶದಲ್ಲಿ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ವರ್ಷಗಳ ಕಾಲ ಹೆಣಗಾಟ ನಡೆಸಿದ ನಂತರ ಇದು ಸಾಧ್ಯವಾಗಿತ್ತು.
ತೈವಾನ್ನ ಆಪಲ್ ಫೋನ್ಗಳ ಪೂರೈಕೆದಾರ ಸಂಸ್ಥೆಯೊಂದಿಗೆ ಸೇರಿ ಜಂಟಿಯಾಗಿ ಭಾರತದಲ್ಲಿ ಆಪಲ್ ಫೋನ್ಗಳ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಟಾಟಾ ಗ್ರೂಪ್ ಮಾತುಕತೆ ನಡೆಸುತ್ತಿದೆ ಎಂದು ಸೆಪ್ಟೆಂಬರ್ನಲ್ಲಿಲೇ ಬ್ಲೂಂಬರ್ಗ್ ಎಂಬ ಹಣಕಾಸು ಅಂತರ್ಜಾಲ ಪತ್ರಿಕೆ ವರದಿ ಮಾಡಿತ್ತು. ಈ ಮೂಲಕ ಭಾರತದಲ್ಲಿ ಐಫೋನ್ಗಳ ಜೋಡಣೆ ಆರಂಭಿಸಲು ಟಾಟಾ ಗ್ರೂಪ್ ಮುಂದಾಗಿತ್ತು.
ಈ ಒಪ್ಪಂದವು ಯಶಸ್ವಿಯಾದರೆ ಐಫೋನ್ಗಳನ್ನು ಉತ್ಪಾದಿಸುವ ಭಾರತದ ಮೊದಲ ಕಂಪನಿಯಾಗಿ ಟಾಟಾ ಗ್ರೂಪ್ ಗುರುತಿಸಿಕೊಳ್ಳಲಿದೆ. ಸದ್ಯಕ್ಕೆ ಆಪಲ್ ಫೋನ್ಗಳ ಉತ್ಫಾದನೆ ಮತ್ತು ಜೋಡಣೆಯನ್ನುತೈವಾನ್ನ ಉತ್ಪಾದನಾ ದೈತ್ಯರಾದ ವಿಸ್ಟ್ರಾನ್ ಮತ್ತು ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್ನಂತಹ ಸಂಸ್ಥೆಗಳು ಭಾರತ ಮತ್ತು ಚೀನಾದಲ್ಲಿ ನಡೆಸುತ್ತಿವೆ.
ಕೋವಿಡ್ ಲಾಕ್ಡೌನ್ಗಳು ಮತ್ತು ಅಮೆರಿಕದೊಂದಿನ ರಾಜಕೀಯ ಉದ್ವಿಗ್ನತೆಗಳಿಂದಾಗಿ ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆಯಲ್ಲಿ ಚೀನಾ ಹೊಂದಿದ್ದ ಪ್ರಾಬಲ್ಯಕ್ಕೆ ಸವಾಲು ಎದುರಾಗಿದ್ದು, ಒಂದೊಮ್ಮೆ ಭಾರತದಲ್ಲಿ ಉತ್ಪಾದನೆ ಸಾಧ್ಯವಾದರೆ ಚೀನಾಕ್ಕೆ ಸವಾಲೊಡ್ಡುವ ದೇಶದ ಯತ್ನಕ್ಕೆ ದೊಡ್ಡ ಬೆಂಬಲ ಸಿಕ್ಕಂತಾಗಲಿದೆ. ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅಪಾಯಗಳ ಹಿನ್ನೆಲೆಯಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲೂ ಆಪಲ್ ಮುಂದಾಗಿದ್ದು ಭಾರತದಲ್ಲಿ ಫೋನ್ ಜೋಡಣೆ ಆರಂಭಿಸಲು ಉತ್ಸುಕವಾಗಿದೆ. ಮುಂದಿನ ದಿನಗಳಲ್ಲಿ ಆಪಲ್ ಹಾದಿಯಲ್ಲೇ ಇತರ ಜಾಗತಿಕ ದೈತ್ಯ ಬ್ರ್ಯಾಂಡ್ಗಳೂ ಭಾರತಕ್ಕೆ ಕಾಲಿಡುವ ಸಾಧ್ಯತೆಗಳು ಹೆಚ್ಚಾಗಿವೆ.
ಎಲೆಕ್ಟ್ರಾನಿಕ್ಸ್ ಮತ್ತು ಹೈಟೆಕ್ ವಸ್ತುಗಳ ಉತ್ಪಾದನೆಯು ಕಂಪನಿಯ ಪ್ರಮುಖ ಗುರಿಗಳಾಗಿವೆ ಎಂದು ಟಾಟಾ ಗ್ರೂಪ್ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ ಹೇಳಿದ್ದರು.ಸಾಫ್ಟ್ವೇರ್, ಸ್ಟೀಲ್ ಮತ್ತು ಕಾರುಗಳಂತಹ ಉದ್ಯಮಗಳಲ್ಲಿ ಟಾಟಾ ಹೆಚ್ಚಿನ ವ್ಯವಹಾರವನ್ನು ಹೊಂದಿರುವ ಟಾಟಾ ಗ್ರೂಪ್ ಸುಮಾರು 128 ಬಿಲಿಯನ್ ಡಾಲರ್ ಆದಾಯದೊಂದಿಗೆ ಭಾರತದ ಅಗ್ರಗಣ್ಯ ಉದ್ಯಮ ಸಮೂಹವಾಗಿದೆ,ಈಗ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯತ್ತ ಹೆಜ್ಜೆ ಇಡುವ ಮೂಲಕ ಕೋಲಾರದ ಐಫೋನ್ ಘಟಕವನ್ನು ಸ್ವಾಧೀನಪಡಿಸಿಕೊಳ್ಳುವ ನಿಟ್ಟಿನಲ್ಲಿ ಸ್ಮಾರ್ಟ್ಫೋನ್ ಪೂರೈಕೆ ಚೈನ್ ನತ್ತ ಸಾಗಿದೆ.