ತುಮಕೂರು: ಕೊರೊನಾ ಲಸಿಕೆ ಕುರಿತಾಗಿ ಹಲವಾರು ಪ್ರಶ್ನೆಗಳ ಹುಟ್ಟುತ್ತಿರುವಾಗ ಲಸಿಕೆ ಪಡೆದವರಂತೆ ಸರ್ಕಾರಿ ವೈದ್ಯಾಧಿಕಾರಿ ನಾಟಕ ಮಾಡಿರುವಂತ ಪ್ರಕರಣ ತುಮಕೂರಿನಲ್ಲಿ ನಡೆದಿದೆ.
ಜಿಲ್ಲಾ ವೈದ್ಯಾಧಿಕಾರಿ ಮತ್ತು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರಜನಿ ಲಸಿಕೆ ಪಡೆದಂತೆ ನಾಟಕಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಕೊರೊನಾ ಸೋಂಕು ತಡೆಯಲು ಸರಕಾರ ಬಿಡುಗಡೆ ಮಾಡಿರುವ ಕೊರೊನಾ ವ್ಯಾಕ್ಸಿನ್ ಅನ್ನು ಡಿಎಚ್ಒ ನಾಗೇಂದ್ರಪ್ಪ, ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ರಜನಿಯವರು ಲಸಿಕೆ ತೆಗೆದುಕೊಳ್ಳುವ ನಾಟಕ ಆಡಿರುವ ವಿಚಾರ ಸಾರ್ವಜನಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.
ಜ.16ರಂದು ತುಮಕೂರು ಜಿಲ್ಲೆಯಲ್ಲಿ ಪ್ರಥಮವಾಗಿ ಕೊರೊನಾ ವಾರಿಯರ್ಸ್ ಗೆ ವ್ಯಾಕ್ಸಿನ್ ನೀಡುವ ಕಾಯ್ರಕ್ರಮಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಇದೇ ವೇಳೆ ಡಿಎಚ್ಒ ಡಾ.ನಾಗೇಂದ್ರಪ್ಪ ಅವರು ಇಂಜೆಕ್ಷನ್ ತುಂಬಿದ ಸೂಜಿಯನ್ನು ಚುಚ್ಚಿಕೊಳ್ಳುತ್ತಿರುವಂತೆ ಪೋಸ್ ನೀಡಿದ್ದು ಬಿಟ್ಟರೆ ಅವರು ಲಸಿಕೆ ತಗೆದುಕೊಂಡಿಲ್ಲ ಎನ್ನಲಾಗಿದೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ಡಿಹೆಚ್ಓ ನಾಗೇಂದ್ರಪ್ಪ ಅವರು, ನಾನು ಲಸಿಕೆ ಹಾಕಿಸಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಜ.16ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಖುದ್ದಾಗಿ ಲಸಿಕೆ ಹಾಕಿಸಿಕೊಳ್ಳಲಾಗಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ದಾಖಲಾತಿಯು ತಾಂತ್ರಿಕ ಅಂಶಗಳಿಂದ ಅಪ್ಲೋಡ್ ಆಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಹಾಗೂ ಈ ಮೂಲಕ ಮಾಧ್ಯಮ ವರದಿ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಡಾ.ರಜನಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಲಸಿಕೆ ತೆಗೆದುಕೊಂಡಿರುವುದರ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ನಾವು ಪ್ರದರ್ಶನಕ್ಕಾಗಿ ನಟಿಸಿದ್ದೇವೇ, ಆದರೆ ನಾವು ಲಸಿಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ವರದಿ:ಸೊಗಡುಶ್ರೀನಿವಾಸ್