- ಗುಣಮಟ್ಟದ ಹಾಲು ಮತ್ತು ದಣಿವರಿಯದೆ ದುಡಿಯುವ ದೇಶಿ ತಳಿ ಅಮೃತ ಮಹಲ್
- ‘ಬೆಣ್ಣೆ ಚಾವಡಿಯೇ ಅಮೃತ ಮಹಲ್ ಆಗಿರುವುದು
- ಮೈಸೂರು ಅರಸರು ಅಭಿವೃದ್ದಿ ಪಡಿಸಿರುವ ಗೋ ತಳಿ
- ಹಳೇ ಮೈಸೂರು ಪ್ರಾಂತ್ಯದ ಕೆಲಸಗಾರ ಗೋ ತಳಿ
- ಹೈದರಾಬಾದ್ ನಿಜಾಮನ ಸೈನ್ಯವನ್ನು ಓಡಿಸಿದ ಅಮೃತ ಮಹಲ್ ಗೋವುಗಳು
ನ್ಯೂಜ್ ಡೆಸ್ಕ್:-ಅಮೃತ ಮಹಲ್ ದೇಶಿ ಗೋ ತಳಿ ಕರ್ನಾಟಕದಲ್ಲಿ ಸ್ಥಳೀಯವಾಗಿ ಅಭಿವೃದ್ದಿಯಾಗಿರುವ ತಳಿ ಇವುಗಳು ಕೆಲಸಗಾರ ತಳಿ ವರ್ಗಕ್ಕೆ ಸೇರಿದವುಗಳಾಗಿವೆ. ಕರ್ನಾಟಕದ ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ವಿಶೇಷವಾಗಿ ಇವೆ ಇವುಗಳನ್ನು ವಿಶೇಷವಾಗಿ ಮೈಸೂರು ಅರಸರು 1572 ರಿಂದ 1636ರ ಕಾಲಘಟ್ಟದಲ್ಲಿ ಅಭಿವೃದ್ಧಿಗೊಳಿಸಿಲಾಗಿದ್ದು ಯುದ್ಧಗಳ ಸಂದರ್ಭದಲ್ಲಿ ಸಾಮಾನು ಸರಂಜಾಮುಗಳ ಸಾಗಾಟಕ್ಕಾಗಿ ಈ ತಳಿಯ ಅಭಿವೃದ್ಧಿಯಾಯಿತು ಎನ್ನುತ್ತಾರೆ.1617-1704 ರಲ್ಲಿ ಆಗಿನ ಮೈಸೂರಿನ ಮಹಾರಾಜರು ಕಾಲಾನುಸಾರವಾಗಿ ಕರುಹಟ್ಟಿಗೆ ರಾಸುಗಳನ್ನು ಸೇರಿಸಿ, ಈ ರಾಸುಗಳಿಗೆ ನಿಗದಿತ ‘ಕಾವಲು’ಗಳನ್ನು ತಮ್ಮ ರಾಜ್ಯದ ವಿವಿಧ ಭಾಗದಲ್ಲಿ ನೀಡಿದರು. ಅಂದಿನ ಮಹಾರಾಜರಾದ ಚಿಕ್ಕದೇವರಾಜ ಒಡೆಯರ್ ರವರು ಈ ಸಂಸ್ಥೆಗೆ ‘ಬೆಣ್ಣೆ ಚಾವಡಿ’ ಎಂದು ನಾಮಕರಣ ಮಾಡಿದರು. 1799 ರಲ್ಲಿ ಟಿಪ್ಪು ಸುಲ್ತಾನ ಬೆಣ್ಣೆ ಚಾವಡಿ ಹೆಸರನ್ನು ‘ಅಮೃತ್ ಮಹಲ್’ ಎಂದು ಮರುನಾಮಕರಣ ಮಾಡಿ, ಅಮೃತ್ ಮಹಲ್ ತಳಿಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿದ. ಹಾಗೂ ಉನ್ನತೀಕರಣಕ್ಕಾಗಿ ಸೂಕ್ತ ಕಾಯ್ದೆಗಳನ್ನು ಜಾರಿಗೆತಂದರು. 1799-1881 ರ ಸಂದರ್ಭದಲ್ಲಿ ಟಿಪ್ಪು ಸುಲ್ತಾನರ ಅವನತಿಯ ನಂತರ ಅಮೃತ್ ಮಹಲ್ ಅಭಿವೃದ್ದಿ ಉಸ್ತುವಾರಿಯನ್ನು ಬ್ರಿಟೀಷರು ತೆಗೆದುಕೊಂಡು ಅವರ ರೀತಿಯಲ್ಲಿಯೇ ಅಮೃತ್ ಮಹಲ್ ದನಗಳನ್ನು ಹಾಲು, ಉಳುಮೆ ಹಾಗೂ ಯುದ್ಧಗಳಲ್ಲಿ ಉಪಯೋಗಿಸುವ ಸಲುವಾಗಿ ಅಭಿವೃದ್ಧಿಪಡಿಸಲು ಕ್ರಮ ಜರುಗಿಸಿದರು. ಈ ಇಲಾಖೆಗೆ ಒಟ್ಟು 143 ಕಾವಲುಗಳಿದ್ದು, ಇವುಗಳ ಉಸ್ತುವಾರಿಯನ್ನು ಅಂದಿನ ಬ್ರಿಟೀಷ್ ಸರ್ಕಾರದ ಮಿಲಿಟರಿ ಸಹಾಯಕರಿಗೆ ನೀಡಲಾಯಿತು.ಮೈಸೂರಿನ ದಿವಾನರಾಗಿದ್ದ ಪೂರ್ಣಯ್ಯನವರು ಈ ಅಮೃತಮಹಲ್ ತಳಿಗಳನ್ನು ತಮಿಳುನಾಡಿನಲ್ಲಿ ಬೆಳೆಸಿದರು. ಇಂದಿಗೂ ತಮಿಳುನಾಡಿನ ಕೆಲಭಾಗಗಳಲ್ಲಿ ಅಮೃತಮಹಲ್ ತಳಿಯ ದನ ಕರುಗಳನ್ನು ಪೂರ್ಣಯ್ಯನ ದನಗಳೆಂದೇ ಕರೆಯುತ್ತಾರೆ. ಮೈಸೂರು ಅರಸರ ಹಾಗು ಹೈದರಾಲಿ, ಟಿಪ್ಪುವಿನ ಸೈನ್ಯದಲ್ಲಿ ಈ ತಳಿಗಳ ಬಂಜಾರವೆಂಬ ದಳ ಪ್ರಮುಖವಾಗಿತ್ತು. ಕೇವಲ 237. ಅಮೃತಮಹಲ್ ತಳಿಯ ಎತ್ತುಗಳು 3000 ದಷ್ಟಿದ್ದ ಹೈದರಾಬಾದ್ ನಿಜಾಮನ ಸೈನ್ಯವನ್ನು ಸೋಲಿಸಿ ಓಡಿಸಿದ್ದು ಹಾಗೂ ಅವುಗಳ ಸಾಮರ್ಥ್ಯವನ್ನು ತೋರಿಸಿದ ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಗುಣಮಟ್ಟದ ಹಾಲು ಮತ್ತು ದಣಿವರಿಯದ ಕೆಲಸಕ್ಕೆ ಹೆಸರಾದ ಅಮೃತ ಮಹಲ್ ತಳಿ.
ಮೊದಲ ಹಾಗೂ ದ್ವಿತೀಯ ಮಹಾಯುದ್ಧಗಳಲ್ಲಿ ಯುದ್ಧ ಪರಿಕರಗಳನ್ನು ಸಾಗಿಸಲು ಈ ತಳಿಯ ಎತ್ತುಗಳು ಉಪಕರಿಸಿದ್ದವು ಎನ್ನುವುದನ್ನು ಇತಿಹಾಸ ಹೇಳುತ್ತದೆ. ಅಮೃತಮಹಲ್ ತಳಿಗಳು ಸಾಕಿದ ಒಡೆಯನಿಗೆ ಅತ್ಯಂತ ನಿಷ್ಠೆ ತೋರಿಸುತ್ತವೆ. ಗಂಟೆಗಳ ಕಾಲ ಆಹಾರ, ನೀರು ಸೇವಿಸದೇ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾಮಾನು ಸಾಗಿಸುವ ಸಾಮರ್ಥ್ಯ ತಳಿಗಳು ಹೋಂದಿವೆ ಹಾಲು ನೀಡುವುದು ಕಡಿಮೆಯಾದರೂ ಶ್ರಮದ ಕೆಲಸಗಳಿಗೆ ಅಮೃತ್ ಮಹಲ್ ಆಕಳುಗಳು ಉಪಯೋಗವಾಗುತ್ತವೆ.
ಅಮೃತ ಮಹಲ್ ಕಾವಲ್’ ಭೂಮಿ ಅಕ್ರಮ ಒತ್ತುವರಿ
ಅಮೃತ ಮಹಲ್ ತಳಿಯ ಮಹತ್ವ ಅರಿತಿದ್ದ ಮೈಸೂರು ಅರಸರು, ತಳಿ ಸಂರಕ್ಷಣೆಗಾಗಿ ಕ್ರಮ ಕೈಗೊಂಡು ಕಾವಲ್ ಪ್ರದೇಶಗಳನ್ನು ಗುರುತಿಸಿದ್ದರು. ಅಮೃತ ಮಹಲ್ ಹೆಸರಿನ ವಿಶಿಷ್ಟ ತಳಿಗಾಗಿಯೇ ನೈಸರ್ಗಿಕ ಹುಲ್ಲುಗಾವಲನ್ನು ರಕ್ಷಿಸಿಟ್ಟ ಪ್ರದೇಶವೇ ‘ಅಮೃತ ಮಹಲ್ ಕಾವಲ್’. ಕರ್ನಾಟಕ ಏಕೀಕರಣ ಆದ ಸಂದರ್ಭದಲ್ಲಿ ನಾಲ್ಕು ಲಕ್ಷ ಎಕರೆಯಷ್ಟಿದ್ದ ಕಾವಲ್ ಪ್ರದೇಶವು ಸದ್ಯ ಕೇವಲ 60 ಸಾವಿರ ಎಕರೆಯಷ್ಟು ಪ್ರದೇಶಕ್ಕೆ ಸೀಮಿತವಾಗಿದೆ. ರಾಜ್ಯ ಸರಕಾರವು ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ 56 ಕಾವಲ್ಗಳನ್ನು ಗುರುತಿಸಿದೆ. ಸರಕಾರದ ಅಧಿಕೃತ ಲೆಕ್ಕಾಚಾರದ ಪ್ರಕಾರ, ಈಗ ಇರುವ 63 ಸಾವಿರ ಎಕರೆಯಷ್ಟು ಪ್ರದೇಶದ ಪೈಕಿ 20 ಸಾವಿರ ಎಕರೆಯಷ್ಟು ಪ್ರದೇಶವು ಅತಿಕ್ರಮಣಕ್ಕೆ ಒಳಗಾಗಿದೆ. ಅತಿಕ್ರಮಣ ನಡೆಯುವವರೆಗೂ ಸುಮ್ಮನೆ ಇರುವುದೆ ತಪ್ಪು. ಈಗಲಾದರೂ ಎಚ್ಚೆತ್ತುಕೊಂಡು, ಅತಿಕ್ರಮಣ ಪ್ರದೇಶಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುವ ಅವಶ್ಯಕತೆ ಇದೆ. ಅಮೃತ ಮಹಲ್ ಕಾವಲ್ ಸಂರಕ್ಷಿಸುವ ವಿಚಾರ ಮತ್ತೆ ಮತ್ತೆ ಸಾರ್ವಜನಿಕ ಚರ್ಚೆಗೆ ಒಳಗಾಗುತ್ತಿದ್ದರೂ, ಸರ್ಕಾರ ಅವುಗಳನ್ನು ಉಳಿಸಿ ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವುದು ಅಪಾಯಕಾರಿ.
ಆಮೃತ ಮಹಲ್ ರಕ್ಷಣೆಗೆ ಚಿತ್ರದುರ್ಗ ಜಿಲ್ಲೆಯ ಗ್ರಾಮಸ್ಥರು ಸಾಹಸ
ಗೋ ಸಂಪತ್ತು ದೇಶದ ಸಂಪತ್ತು ಎಂಬ ಹಿರಿಯರ ಮಾತು.ಮನೆಯಲ್ಲೊಂದು ಗೋವು ಇದ್ದರೆ ಆ ಮನೆಯಲ್ಲಿ ಮುಕ್ಕೋಟಿ ದೇವರು ನೆಲೆಸಿರುತ್ತವೆ ಎನ್ನುವುದು ನಂಬಿಕೆ ಅದರಂತೆ ದೇಶಿ ಗೋ ಸಂಪತ್ತನ್ನು ಉಳಿಸಲು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಡಗವಳ್ಳಿ ಗ್ರಾಮದ ಜನ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.ಅದರಲ್ಲೂ ಅಪರೂಪದ ತಳಿಯಾದ ಅಮೃತ್ ಮಹಲ್ ಪಕ್ಕಾ ದೇಶಿ ತಳಿಯ ಹಸುಗಳನ್ನು ಸಾಕುತ್ತ ಅವುಗಳ ವಂಶಾಭಿವೃದ್ದಿಗೆ ಹರಸಾಹಸ ಪಡುತ್ತಿದ್ದಾರೆ.
ಗ್ರಾಮದಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಗಳಿದ್ದು, ಪ್ರತಿಯೊಬ್ಬರೂ ಅಮೃತ್ ಮಹಲ್ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ. ಹಸು ಸಾಕಿದ ಬಹುತೇಕರು ಹಾಲು ಮಾರಾಟ ಮಾಡೋದಿಲ್ಲ, ಬದಲಿಗೆ ಕರುಗಳೇ ಹಾಲು ಕುಡಿದುಕೊಂಡು ಬೆಳೆಯುತ್ತಿವೆ. ಇರುವ ಅಲ್ಪಸ್ವಲ್ಪ ಜಾಗದಲ್ಲಿ ಮೇವು ಬೆಳೆದುಕೊಳ್ಳಲು ಸಾದ್ಯವಾಗುವುದಿಲ್ಲ ಎಂದು ಗ್ರಾಮದ ಜನ ಪರೆದಾಡುತ್ತಿದ್ದರಂತೆ. ಗ್ರಾಮದ ಸಮಿಪವೇ ಇರುವ ಸಾವಿರಾರು ಎಕರೆ ಅಮೃತ್ ಮಹಲ್ ಕಾವಲು ಪ್ರದೇಶದಲ್ಲಿ ಇದ್ದು ಅಲ್ಲಿ ಗ್ರಾಮದ ಗೋವುಗಳಿಗೆ ಮೇವು ಬೆಳೆದುಕೊಳ್ಳಲು,ಹಾಗು ಮೇಯಿಸಲು ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆ ಇದೆ ಎನ್ನುತ್ತಾರೆ ಗ್ರಾಮಸ್ಥರು. ಅರಸರ ಕಾಲದಲ್ಲಿ ಅಮೃತ್ ಮಹಲ್ ಉಳಿಸುವ ನಿಟ್ಟಿನಲ್ಲಿ ಸರ್ವೆಗಾರಿಕೆ ಪಡೆದಿದ್ದ ಗ್ರಾಮದ ಬಡೇಗೌಡರ ಕುಟುಂಬ ಇಂದಿಗೂ ಅಮೃತ್ ಮಹಲ್ ತಳಿಯ ಸಂವರ್ಧನೆಯ ಕಾಯಕದಲ್ಲಿ ತೊಡಗಿಕೊಂಡಿದೆ. ಆದರೆ, ಮೇವು ಸಮಸ್ಯೆಯಾಗುತ್ತಿದ್ದು, ಅಮೃತ್ ಮಹಲ್ ಕಾವಲಿನಲ್ಲಿ ಗ್ರಾಮದ ಜನರ ಗೋವುಗಳು ಮೇಯಿಸಿಕೊಳ್ಳಲು ಸರ್ಕಾರ ಅನುವು ಮಾಡಿಕೊಡಬೇಕು ಎಂದು ಮನವಿ ಒತ್ತಾಯಿಸಿರುತ್ತಾರೆ.
ಅಮೃತ್ ಮಹಲ್ ಉಳಸಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.
ರಾಜ್ಯ ಸರಕಾರ ತೋರುತ್ತಿರುವ ನಿಷ್ಕಾಳಜಿ ಬೇಜವಾಬ್ದಾರಿತನ ಅಲ್ಲದೆ ಬೇರೇನೂ ಅಲ್ಲ . ಗೋವಿನ ತಳಿಗಳ ರಕ್ಷಣೆಯನ್ನು ಕೇವಲ ಭಾವನಾತ್ಮಕ ನೆಲೆಯಲ್ಲಿ ನೋಡುವುದಕ್ಕೆ ಮಾತ್ರ ಸೀಮಿತಗೊಳಿಸಬೇಕಿಲ್ಲ. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿರುವ ಶ್ರಮಜೀವಿಗಳಾದ ಅಪರೂಪದ ದೇಸಿ ತಳಿಗಳ ಉಳಿವು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತೆಯೇ ಸರಿ. ಇಂತಹ ದೇಸಿ ತಳಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ರಾಜ್ಯ ಸರಕಾರದ ಆದ್ಯ ಕರ್ತವ್ಯ. ಆದರೆ, ಸರಕಾರ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ಮಾಡಿರುವುದು ಸಮರ್ಥನೀಯವಲ್ಲ.
ವಿಶೇಷ ಬರಹ:ಚ.ಶ್ರೀನಿವಾಸಮೂರ್ತಿ