ಶ್ರೀ ಚೌಡೇಶ್ವರಿ ಅಮ್ಮನ ಸಮೇತ 12 ಊರ ದೇವರುಗಳ 11 ಪಲ್ಲಕ್ಕಿ ಜಾತ್ರಾ ಮಹೋತ್ಸವ ಹಾಗು ಶ್ರೀ ದ್ರೌಪದಮ್ಮ ದೇವಿ ಕರಗದ ಉತ್ಸವ ಸಂಭ್ರಮ ಸಡಗರದಿಂದ ಜರುಗಿತು.ಸಾಂಸ್ಕೃತಿಕ ಮೆರಗು ಹೆಚ್ಚಿಸುವ ಆಚರಣೆಗಳಲ್ಲಿ ಒಂದಾದ ಊರ ಹಬ್ಬ ಹಾಗು ಕರಗ ಮಹೋತ್ಸವ ಊರಿನ ಜನರಲ್ಲಿ ಸಂಭ್ರಮದ ನೆನಪು ಅಚ್ಚಳಿಯದ ಉಳಿಸುವಂತಹದು.
ಊರ ದೇವರುಗಳ ಪಲ್ಲಕ್ಕಿ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಪಟ್ಟಣದಾದ್ಯಂತ ರಥ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯಗಳು ಬೀದಿ ಎಂದು ಗುರುತಿಸುವ ವಲ್ಲಭಾಯ್ ರಸ್ತೆ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಜಗಮಗಿಸುತಿತ್ತು.
ಕರಗ ಮಹೋತ್ಸವ ಊರಿನ ಯುವ ಸಮುದಾಯದಲ್ಲಿ ವಿಶಿಷ್ಟ ಅನುಭುತಿ ನೀಡುತ್ತದೆ.ಕರಗಧಾರಿ ರಾತ್ರಿಯಿಡೀ ವೀರಪುತ್ರರೊಂದಿಗೆ ಕೂಡಿ ಪಟ್ಟಣದ ಬೀದಿಗಳಲ್ಲಿ ಹೆಜ್ಜೆ ಹಾಕುತ್ತ ಸಾಗುತ್ತಿದ್ದರೆ ಅವರೊಟ್ಟಿಗೆ ಯಾವುದೆ ಬೇದಭಾವ ಇಲ್ಲದೆ ಎಲ್ಲರೂ ಕೂಡಿ ವಿಶೇಷವಾಗಿ ಯುವ ಸಮುದಾಯ ಜಾಗರಣೆ ಇದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.


ಶ್ರೀನಿವಾಸಪುರ:ನೂತನ ಸಂವತ್ಸರ ಆಚರಣೆ ಹಿನ್ನಲೆಯಲ್ಲಿ ಯುಗಾದಿ ಅಂಗವಾಗಿ ಶ್ರೀನಿವಾಸಪುರದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಸಮೇತ ಊರ ದೇವರುಗಳ ಪಲ್ಲಕ್ಕಿ ಜಾತ್ರಾ ಮಹೋತ್ಸವ ಹಾಗು ಶ್ರೀ ದ್ರೌಪದಮ್ಮ ದೇವಿ ಕರಗದ ಉತ್ಸವ ಈ ಬಾರಿಯೂ ಅದ್ದೂರಿಯಾಗಿ ನಡೆಯಿತು. ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವರ ಪ್ರಧಾನ ಪಲ್ಲಕ್ಕಿಯಾಗಿ,ಶ್ರೀ ಗಂಗಮ್ಮ ಮತ್ತು ಪೀಲೆಕಮ್ಮ, ಶ್ರೀಲಕ್ಷ್ಮೀವೆಂಕಟೇಶ್ವರ, ಶ್ರೀ ಉಗ್ರ ನೃಸಿಂಹ,ಶ್ರೀ ನಗರೇಶ್ವರ,ಶ್ರೀ ವಾಸವಿ ಕನ್ಯಾಕಾ ಪರಮೇಶ್ವರಿ,ಗಟ್ಟಹಳ್ಳಿ ಶ್ರೀ ನಡೀರಮ್ಮ, ಗುಂಡಮನತ್ತ ಶ್ರೀ ಅಷ್ಟಮೂರ್ತಮ್ಮ, ಶ್ರೀ ರೇಣುಕಾಎಲ್ಲಮ್ಮ,ಶ್ರೀ ನಲ್ಲಗಂಗಮ್ಮ,ಶ್ರೀ ಸಪ್ತಮಾತೃಕೇಯರ ದೇವರುಗಳ ಹೂವಿನ ಪಲ್ಲಕ್ಕಿ ರಥಗಳು ವಿದ್ಯತ್ ದೀಪಾಲಂಕಾರದಲ್ಲಿ ಒಂದಕ್ಕಿಂತ ವಿಭಿನ್ನವಾಗಿ ಅಲಂಕೃತವಾಗಿ ಸಾಲಾಗಿ ಸಾಗಿ ಬಂದಿದ್ದು ಜನಮನ ಸೂರೆಗೊಂಡಿತು.

ಯುಗಾದಿಯಂದು ಮುಸ್ಸಂಜೆಯಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಪ್ರಾರಂಭಗೊಂಡು ಪಟ್ಟಣದಾದ್ಯಂತ ಸಂಚರಿಸಿ ಮಾರನೆ ದಿನ ಬೆಳಗಿನವರಿಗೂ ಪಲ್ಲಕ್ಕಿ ಜಾತ್ರೆ ನಡೆಸಲಾಯಿತು. ದೇವರುಗಳ ಉತ್ಸವ ಸಾಗಿ ಬಂದ ಪ್ರತಿ ಬೀದಿಯಲ್ಲಿ ಭಕ್ತರು ದೇವರುಗಳಿಗೆ ಪೂಜೆ ತಟ್ಟೆ ನೀಡಿ ಪ್ರಾರ್ಥನೆ ಮಾಡಿದರು.


ಕರಗಕ್ಕೆ ಪಾದ ಪೂಜೆ ಮಾಡಿದರು
ಮನೆಗಳ ಬಳಿ ಕರಗಕ್ಕೆ ಪಾದ ಪೂಜೆ ಮಾಡಿ ಜನ ಪುನಿತರಾದರು.ಕರಗದ ಉತ್ಸವ ವೇಳೆ ಯುವಕರು ಸ್ವಯಂ ಸೇವಕರಾಗಿ ಕರಗದೊಂದಿಗೆ ಹೆಜ್ಜೆ ಹಾಕಿದರು. ಹೊಳೂರಿನ ಕರಗ ಕೋಲಾರ ಜಿಲ್ಲೆಯಲ್ಲೆ ಪ್ರಖ್ಯಾತಿ ಹೊಂದಿದೆ ಅಲ್ಲಿ ಕರಗ ಹೊರುವ ತಿಗಳ ಸಮಾಜದ ವೆಂಕಟೇಶ್ ಅವರೆ ಶ್ರೀನಿವಾಸಪುರ ಪಟ್ಟಣದಲ್ಲೂ ಕರಗ ಹೊರುವುದು ಸಂಪ್ರದಾಯ,, ನಾಲ್ಕನೆ ಬಾರಿಗೆ ಕರಗ ಹೊತ್ತಿದ್ದ ಹೋಳೂರುವೆಂಕಟೇಶ್ ಶ್ರದ್ಧಾ ಭಕ್ತಿಯಿಂದ ಜನಾಕರ್ಷಣೆಯಾಗಿ ಕರಗ ನಡೆಸಿದರು.ಪಟ್ಟಣದ ಕಟ್ಟೆಕೆಳಗಿನ ಪಾಳ್ಯ,ಎಂ.ಜಿ.ರಸ್ತೆ,ಮಾರುತಿ ನಗರ ಹಳೇಪೆಟೆ ಸೇರಿದಂತೆ ಕೆಲವು ಭಾಗಗಳಲ್ಲಿ ಕರಗದ ನೃತ್ಯಕ್ಕಾಗಿ ಬಣ್ಣ ಬಣ್ಣದ ಲೈಟ್ ಗಳಿಂದ ಕೂಡಿದಂತ ವೇದಿಕೆಯನ್ನು ನಿರ್ಮಾಣ ಮಾಡಲಾಗಿತ್ತು.