ಶ್ರೀನಿವಾಸಪುರ:– ಯುಗಾದಿ ಹೊಸವರ್ಷದ ಪ್ರಯುಕ್ತ ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಸಮೇತ ಊರ ದೇವರುಗಳ ಜನಜಾತ್ರೆ ಉತ್ಸವ ಅದ್ದೂರಿಯಾಗಿ ನಡೆಸಲಾಯಿತು.
ಇದರ ಅಂಗವಾಗಿ ಇದೇ ಪ್ರಥಮ ಬಾರಿಗೆ ಎನ್ನುವಂತೆ ಕರಗ ಮಹೋತ್ಸವ ಸಹ ಆಯೋಜಿಸಲಾಗಿತ್ತು. ಪಟ್ಟಣದ ಗ್ರಾಮದೇವತೆ ಶ್ರೀ ಚೌಡೇಶ್ವರಿ,ಶ್ರೀ ಲಕ್ಷ್ಮೀನೃಸಿಂಹ, ಶ್ರೀ ಲಕ್ಷ್ಮೀನಾರಾಯಣ, ಶ್ರೀ ಉಗ್ರ ನೃಸಿಂಹ, ಶ್ರೀ ನಗರೇಶ್ವರ,ಶ್ರೀ ವಾಸವಿ ಕನ್ಯಾಕಾ ಪರಮೇಶ್ವರಿ,ಶ್ರೀ ತಿರುಮಲರಾಯ,ಶ್ರೀ ಗಂಗಮ್ಮ,ಗಟ್ಟಹಳ್ಳಿ ಶ್ರೀ ನಡೀರಮ್ಮ, ಗುಂಡಮನತ್ತ ಶ್ರೀ ಅಷ್ಟಮೂರ್ತಮ್ಮ, ಶ್ರೀ ರೇಣುಕಾಎಲ್ಲಮ್ಮ,ಶ್ರೀ ವರದಬಾಲಂಜನೇಯ ದೇವಾಲಯ, ಶ್ರೀಪೀಲೇಕಮ್ಮ,ಶ್ರೀ ಸಪ್ತಮಾತೃಕೇಯರ ದೇವರುಗಳ ಹೂವಿನಿಂದ ಅಲಂಕೃತಗೊಂಡ ಬೆಳ್ಳಿ ಪಲ್ಲಕ್ಕಿ ರಥಗಳ ಶೋಭಾ ಯಾತ್ರೆ ಯುಗಾದಿ ಹಬ್ಬದ ದಿನ ಸಂಜೆ ಪ್ರಾರಂಭಗೊಂಡು ಪಟ್ಟಣದಾದ್ಯಂತ ಸಂಚರಿಸಿ ಮಾರನೆ ದಿನ ಬೆಳಗಿನ ಜಾವದವರಿಗೂ ನಡೆಯಿತು.
ಉತ್ಸವಗಳ ಜೊತೆಗೆ ವಿಶೇಷ ಆಕರ್ಷಣೆಯಾಗಿ ಹೊಳೂರಿನಲ್ಲಿ ಕರಗ ಹೊರುವ ವೆಂಕಟೇಶ್ ರವರು ಪಟ್ಟಣದಲ್ಲೂ ಕರಗ ಹೊತ್ತು ಆಕರ್ಷಣೆಯಾಗಿ ನಡೆಸಿಕೊಟ್ಟರು,ಪಟ್ಟಣದ ಕಟ್ಟೆಕೆಳಗಿನ ಪಾಳ್ಯ ವೃತ್ತದಲ್ಲಿ ವಿಶೇಷವಾಗಿ ವೇದಿಕೆ ನಿರ್ಮಿಸಿ ಕರಗದ ನೃತ್ಯ ಏರ್ಪಡಿಸಲಾಗಿತ್ತು.