ತುಮಕೂರು:ತೂಮಕೂರು ಜಿಲ್ಲೆಯ ಪ್ರಮುಖ ರಾಜಕಾರಣಿಗಳಾದ ಕುಣಿಗಲ್ ಮಾಜಿ ಶಾಸಕ ಹಾಗು ತುಮಕೂರು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮತ್ತು ನೇಕಾರ ಸಮಾಜದ ಪ್ರಭಾವಿ ನಾಯಕ ಹಾಗು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಧ್ಯಕ್ಷ ಎಂ.ಡಿ.ಲಕ್ಷ್ಮೀನಾರಯಣ್ ಕಾಂಗ್ರೆಸ್ಸನ್ನು ತೊರೆಯುವ ಬಗ್ಗೆ ಕಾಂಗ್ರೆಸ್ ಮುಖಂಡರ ಬಳಿ ನೇರವಾಗಿ ಪ್ರಸ್ತಾಪಿಸಿ ನಂತರ ರಾಜಿನಾಮೆ ನೀಡಿದ್ದಾರೆ.
ಮುದ್ದಹನುಮೇಗೌಡ ಬೆಂಗಳೂರುಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿ ಪಕ್ಷ ತೊರೆಯುವ ಕುರಿತಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಪಕ್ಷತ್ಯಜಿಸುವ ಕುರಿತಾಗಿ ರಾಜಿನಾಮೆ ಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಮುದ್ದಹನುಮೇಗೌಡ ಕಾಂಗ್ರೆಸ್ ತ್ಯಜಿಸಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಸ್ಪರ್ದಿಸುವುದಾಗಿ ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲ ದೂರವಾಣಿ ಕರೆ ಮಾಡಿ ಪಕ್ಷದಲ್ಲೇ ಇರುವಂತೆ ಹೇಳಿದ್ದರು. ನಂತರದಲ್ಲಿ ಏನನ್ನೂ ಮಾತನಾಡಿಲ್ಲ ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲು ಬಯಸುವುದಿಲ್ಲ. ಇಷ್ಟು ವರ್ಷ ನಡೆದ ರಾಜಕೀಯ ಧೋರಣೆಗಳು ಈಗಿನ ಪರಿಸ್ಥಿತಿಗೆ ಕಾರಣ 1989ರಲ್ಲಿ ಕಾಂಗ್ರೆಸ್ ‘ಬಿ’ ಪಾರಂ ಕೊಟ್ಟು ನಂತರ ಬೇರೆಯವರಿಗೆ ಕೊಟ್ಟರು 2014ರ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಸಂಸದರಾಗಿ ಚುನಾಯಿತರಾಗಿದ್ದ ನನಗೆ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರನ್ನು ಕಣಕ್ಕಿಳಿಸಿ ಇದನ್ನೆ ಕಾರಣ ನೀಡಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು.
ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಯಿತು, ಅತ್ಯಂತ ಕ್ರಿಯಾಶೀಲನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕೆ ನನ್ನದೇ ಆದ ಸೇವೆ ಸಲ್ಲಿಸಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಸೇವೆಯೂ ಇದೆ ಎನ್ನುತ್ತಾರೆ.
ಕಳೆದ ಮೂರೂಕಾಲು ವರ್ಷದಿಂದ ಹೆಬ್ಬೂರಿನ ಅವರ ತೋಟದಲ್ಲಿ ಅಡ್ಡಾಡುತ್ತ,ಅವರ ಹಳೆಯ ವಿಧಾನಸಭಾ ಕ್ಷೇತ್ರ ಕುಣಿಗಲ್ ನಲ್ಲಿನ ಅನುಯಾಯಿಗಳೊಂದಿಗೆ ಒಡನಾಡ ಇಟ್ಟುಕೊಂಡಿರುವ ಅವರು ಆಗಾಗ ಮಾಧ್ಯಮಗಳಲ್ಲಿ ಜ್ವಾಲಾಮುಖಿಯಂತೆ ತಮ್ಮ ಸಾತ್ವಿಕ ಸಿಟ್ಟನ್ನು ಹೊರಹಾಕುತ್ತ, ಅಳೆದೂ ತೂಗಿ ಗಟ್ಟಿ ನಿರ್ಧಾರವೊಂದನ್ನು ಕೈಗೊಂಡಂತಿದೆ, ಈಗಾಗಲೇ ಜೆಡಿಎಸ್ ನಲ್ಲಿ ಒಂದು ಸಲ ವಿಧಾನಸಭೆ ಹಾಗೂ ಒಂದು ಸಲ ಲೋಕಸಭೆಗೆ ಸ್ಪರ್ಧಿಸಿ ಸೋತಿರುವ ಗೌಡರು ಮತ್ತೆ ತೆನೆ ಹೊರುವ ಸಾಹಸ ಮಾಡಲಾರರು ಎನ್ನಲಾಗಿದ್ದು ಮುದ್ದಹನುಮೇಗೌಡರ ಮುಂದಿನ ನಡೆ ಸ್ಪಷ್ಟವಾಗಿದ್ದು ಕೈ ತೊರೆಯುವ ಅವರು ಕಮಲ ಹಿಡಿಯಬಹುದು ಎನ್ನುವ ಮಾತು ಕೇಳಿಬರುತ್ತಿದೆ.
ಕಾಂಗ್ರೆಸ್ ಹಿಂದುಳಿ ವರ್ಗಗಳ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಯಣ್
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ,ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಲು ಸಿದ್ದರಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ನಡವಳಿಕೆಯಿಂದ ಬೇಸತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ ಎಂದಿರುತ್ತಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ಬಿಜೆಪಿಯಲ್ಲಿ ಕೆಲಸ ಮಾಡಿದ್ದೆ. ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದೆ. ಕಳೆದ 5 ವರ್ಷಗಳಿಂದ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷನಾಗಿ ಪಕ್ಷ ನೀಡಿದ ಜವಾಬ್ದಾರಿ ನಿರ್ವಹಿಸಿದ್ದೇನೆ. ಎಲ್ಲಾ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಹಿಂದುಳಿದ ವರ್ಗಗಳಲ್ಲಿ ಬರುವ 197 ಜಾತಿಗಳ ಪ್ರಮುಖರು ಹಾಗೂ ಸಮುದಾಯಗಳನ್ನು ಗುರುತಿಸಿ ಸಂಘಟನೆ ಮಾಡಿದ್ದೇನೆ. ಆ ಮೂಲಕ ಪಕ್ಷವನ್ನು ಬಲಪಡಿಸುವ ನಿಟ್ಟಿಲ್ಲಿ ಕೆಲಸ ಮಾಡಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಹಿಂದುತ್ವದ ವಿರೋಧಿ ನಿಲವು ಹೊಂದಿದ್ದು ಹಿಂದೂ ಸಂಘಟನೆಗಳನ್ನು ಮೂಲೆ ಗುಂಪು ಮಾಡುವಲ್ಲಿ ತೆಗೆದುಕೊಂಡ ನಿರ್ಣಯವನ್ನು ವಿರೋಧಿಸಿದ್ದೆ.ಕಾಂಗ್ರೆಸ್ನ ನಾಯಕರ ಜೊತೆ ಈ ಬಗ್ಗೆ ಚರ್ಚಿಸಿದಾಗ ಆರ್ಎಸ್ಎಸ್ ಮೂಲದ ವ್ಯಕ್ತಿಗಳು ಪಕ್ಷದಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಹೊರಬಂದ ನಂತರ ನನ್ನ ರಾಜಕೀಯ ಭವಿಷ್ಯ ಮತ್ತು ಮುಂದಿನ ದಾರಿಗಳ ಬಗ್ಗೆ ಚಿಂತಿಸಿದೆ ಎಂದು ಸ್ಪಷ್ಟಪಡಿಸಿದರು.
ತುರುವೇಕೆರೆ ವಿಧಾಸಭಾ ಕ್ಷೇತ್ರದಿಂದ ನನ್ನನ್ನು ಹಿಂದೆ ಆಯ್ಕೆ ಮಾಡಿ ಕಳುಹಿಸಿದ ಅಭಿಮಾನಿಗಳ ಜೊತೆಗೆ ಚರ್ಚಿಸಿದೆ. ಕಳೆದ 20 ವರ್ಷಗಳಿಂದ ನೇಕಾರ ಸಮಾಜದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ರಾಜ್ಯದ ಎಲ್ಲಾ ನೇಕಾರ ಬಂಧುಗಳು, ಹಿಂದುಳಿದ ವರ್ಗಗಳ ಎಲ್ಲ ಪ್ರಮುಖರು ಹಾಗೂ ಹಿಂದುಳಿದ ನಾಯಕರ ಜತೆ ಚರ್ಚಿಸಿದೆ. ಅವರು ನನಗೆ ಸ್ಪಷ್ಟ ಸಲಹೆ ಕೊಟ್ಟರು ಎಂದು ಹೇಳಿದರು.
ಹಿಂದೆ ಬಿಜೆಪಿಯಲ್ಲಿ ಶಾಸಕನಾಗಿ, ವಿಧಾನ ಪರಿಷತ್ ಸದಸ್ಯನಾಗಿ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಕೆಲಸ ಮಾಡಲು ಕಾರಣೀಭೂತರಾದ ಬಿಜೆಪಿಗೆ ಪುನಃ ಮರಳಬೇಕೆಂದು ತೀರ್ಮಾನಿಸಿರುವೆ ಎಂದಿರುವ ಅವರು ಹಿಂದುಳಿದ ವರ್ಗದ ರಾಜ್ಯಧ್ಯಕ್ಷನಾಗಿ 5 ವರ್ಷ ತುಂಬಿದ ಸಂರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ನಡೆವಳಿಕೆ ವಿರೋಧಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದರು.
ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರು ಕೊಟ್ಟ ದಿನಾಂಕದಂದು ಬಿಜೆಪಿ ಸೇರುತ್ತೇನೆ ಎಂದು ಹೇಳಿದರು.
ವರದಿ:ಸೊಗಡುಶ್ರೀನಿವಾಸ್