ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕಿನಾದ್ಯಂತ ಇಂದು ವೈಕುಂಠ ಏಕಾದಶಿ ಸಂಭ್ರಮ,ಸಡಗರ ಭಕ್ತಿ ಭಾವನೆ ಮನೆ ಮಾಡಿತ್ತು ತಾಲೂಕಿನಲ್ಲಿರುವ ಬಹುತೇಕ ವೈಷ್ಣವ ದೇವಾಲಯಗಳಲ್ಲಿ ವಿಶೇಷ ಪೂಜೆ ಅಭಿಷೇಕಗಳು ಕೆಲವೊಂದಡೆ ಹೋಮ ಹವನ ನಡೆಯಿತು. ಭಕ್ತಾದಿಗಳು ಮುಂಜಾನೆಯಿಂದಲೆ ಸರದಿ ಸಾಲಿನಲ್ಲಿ ನಿಂತು ದೇವರ ಕೃಪೆಗೆ ಪಾತ್ರರಾದರು.
ಧರ್ನುಮಾಸದ ಶುಕ್ಲಪಕ್ಷದಲ್ಲಿ ಬರುವ ಈ ವೈಕುಂಠ ಏಕಾದಶಿ ವಿಷ್ಣು ದೇವರಿಗೆ ಅತ್ಯಂತ ಪ್ರಿಯವಾದ ದಿನವಾಗಿದ್ದು.ವೈಕುಂಠ ಏಕಾದಶಿಯಂದು ದೇವತೆಗಳು ಭೂಲೋಕಕ್ಕೆ ಬಂದು ಬ್ರಹ್ಮಾಂಡ ನಾಯಕ ವಿಷ್ಣುವನ್ನು ಪೂಜಿಸುತ್ತಾರೆ ಎಂದು ಪುರಾಣಗಳಲ್ಲಿ ಬಿಂಬಿತವಾದಂತೆ ವೈಕುಂಠ ಏಕಾದಶಿ ದಿನದಂದು ವೈಷ್ಣವ ದೇವಾಲಯಗಳಲ್ಲಿ ಉತ್ತರ ದ್ವಾರದ ಮೂಲಕ ಭಗವಾನ್ ವಿಷ್ಣುವಿನ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿ ಲಭ್ಯವಾಗಲಿದೆ ಎಂಬ ನಂಬಿಕೆಯಲ್ಲಿ ಭಕ್ತರು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ವೈಷ್ಣವ ದೇವಾಲಯಗಳಲ್ಲಿ ದೇವರ ದರ್ಶನ ಪಡೆದು ಪುನೀತರಾದರು.
ತಾಲೂಕಿನ ವೈಷ್ಣವ ದೇವಾಲಯಗಳಾದ ಗನಿಬಂಡೆ ಶ್ರೀನಿವಾಸ ದೇವರು,ತಾಡಿಗೋಳ್ ಶ್ರೀ ಲಕ್ಷ್ಮೀನರಸಿಂಹ ದ್ವಾರಸಂದ್ರ ಶ್ರೀ ನಾರಸಿಂಹ ದೇವರ ಗುಡಿ,ವಲ್ಲಬಾಯ್ ರಸ್ತೆಯ ಶ್ರೀ ಕೋದಂಡರಾಮದೇವಾಲಯ,ಯಲ್ದೂರು ಪುರಾಣ ಪ್ರಸಿದ್ಧ ಶ್ರೀ ಕೋದಂಡರಾಮರ ದೇವಸ್ಥಾನ, ಸರೋಜಿನಿರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿ ಮಠ,ಸಿ.ಹೊಸೂರಿನ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಅಲಂಕಾರ ಹಾಗು ಉತ್ಸವಗಳನ್ನು ಆಯೋಜಿಸಲಾಗಿತ್ತು,ಹಳೇಪೇಟೆಯ ಭೂದೇವಿ,ಶ್ರೀದೇವಿ ಸಮೇತ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವರಿಗೆ ಕಲ್ಯಾಣೋತ್ಸವ ಪೂಜಾ ಕಾರ್ಯಕ್ರಮ ನಡೆಸಲಾಯಿತು.
ರೋಣೂರು ಶ್ರೀ ವೆಂಕಟೇಶ್ವರ ದೇವರಿಗೆ ಅಮೇರಿಕಾದ ಮಿನ್ನೇಸೋಟ ರಾಜ್ಯದ ಮಿನೇಪೋಲಿಸ್ ನಗರದಲ್ಲಿರುವ ಪ್ರಖ್ಯಾತ ಶ್ರೀ ವರದರಾಜ ಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ಮುರಳಿಭಟ್ಟರ್ ನೇತೃತ್ವದಲ್ಲಿ ದೇವಾಲಯಕ್ಕೆ ಅದ್ಧೂರಿಯಾಗಿ ಸುಂದರ ಹೂವುಗಳಿಂದ ಅಲಂಕೃತಗೊಳಿಸಿ ವಿಶೇಷ ಪೂಜೆಗಳು ನಡೆಸಲಾಯಿತು. ವಿಶೇಷ ಅಲಂಕಾರವನ್ನು ಕಣ್ತುಂಬಿಕೊಳ್ಳಲು ದೊಡ್ದಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದರು.
ಅರಿಕೇರಿಯ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಮೂಲದೇವರಿಗೆ ಚಂದನದ ಅಲಂಕಾರ ಮಾಡಿದ್ದು,ವೈಕುಂಠ ದ್ವಾರ(ಉತ್ತರದಬಾಗಿಲು) ನಿರ್ಮಿಸಿ ವಿಶೇಷವಾಗಿ ರಾಮತಾರಕ ಹೋಮ ಆಯೋಜಿಸ್ಲಾಗಿತ್ತು ನಂತರದಲ್ಲಿ ಅನ್ನಪೂರ್ಣಾ ಭಕ್ತ ಮಂಡಳಿ ವತಿಯಿಂದ ವಿಶೇಷ ಭಜನೆ ಆಯೋಜಿಸಿ,ತೀರ್ಥ, ಲಡ್ಡು ಪ್ರಸಾದವನ್ನು ವಿತರಿಸಲಾಯಿತು.
ವೈಕುಂಠ ಏಕಾದಶಿ ಜೊತೆಗೆ ಇಂದೆ ದ್ವಾದಶಿ ಇರುವ ಹಿನ್ನಲೆಯಲ್ಲಿ ಇಂದು ರಾತ್ರಿವರೆಗೂ ಭಕ್ತರು ವೈಷ್ಣವ ದೇವಾಲಯಗಳಿಗೆ ಭೇಟಿ ನೀಡಿತ್ತಿದ್ದರು.