ಶ್ರೀನಿವಾಸಪುರ:ಡಾ ಬಿಆರ್ ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ.ನಾವು ವಿದೇಶಿ ಆಳ್ವಿಕೆಯಿಂದ ಮುಕ್ತರಾಗಿ ಸ್ವಾತಂತ್ರ್ಯಗೊಂಡು ಆಧುನಿಕವಾಗಿ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿರ್ಮಾಣವಾಗಲು ಸಂವಿಧಾನ ಸಹಕಾರಿಯಾಗಿದೆ,ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮೂಲಭೂತ ಹಕ್ಕುಗಳು ನಮ್ಮ ಸಂವಿಧಾನ ನಮಗೆ ನೀಡಿರುವ ಬಹುದೊಡ್ಡ ಕೊಡುಗೆಗಳಾಗಿವೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.
ಮುಳಬಾಗಿಲು ತಾಲೂಕಿನಿಂದ ಆಗಮಿಸಿದ ಸಂವಿಧಾನ ಜಾಗೃತಿ ಜಾಥವನ್ನು ತಾಲೂಕಿನ ಗಡಿಯಲ್ಲಿ ಅಂಬೇಡ್ಕರ್ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದ ಅವರು ನಂತರ ಲಕ್ಷ್ಮೀಸಾಗರದ ಶತಶೃಂಗ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು ಭಾರತೀಯ ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನವರಿ 26 ರಿಂದ ಫೆಬ್ರವರಿ 23ರ ವರೆಗೆ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥ ಸಂಚರಿಸಲಿದ್ದು ನಮ್ಮ ತಾಲೂಕಿಗೂ ಆಗಮಿಸಿದೆ ಅತ್ಯಂತ ಹೆಮ್ಮೆಯಿಂದ ನಾವೆಲ್ಲ ಸ್ವಾಗತಿಸಿದ್ದೇವೆ ತಾಲೂಕಿನಾದ್ಯಂತ ಸಂಚರಿಸಲು ಸಹಕಾರ ಮಾಡಿಕೊಡುವ ಮೂಲಕ ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತಾಗಿ ಎಲ್ಲರಿಗೂ ಅರಿವು ಮೂಡಿಸೋಣ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸನ್ ಮಾತನಾಡಿ ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಆಯೋಜಿಸಿದೆ ಎಂದರು.ತಾಲೂಕು ಪಂಚಾಯಿತಿ ಇಒ ಶಿವಕುಮಾರಿ ಮಾತನಾಡಿ ಸಂವಿಧಾನದ ಮಹತ್ವ ಹಾಗೂ ದೇಶದ ಜನತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಕುರಿತಂತೆ ರಾಜ್ಯದ ನಾಗರಿಕರು, ಮಹಿಳೆಯರು, ಯುವಜನರಿಗೆ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ವಿಭಿನ್ನ ಕಾರ್ಯಕ್ರಮ ಇದಾಗಿದೆ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲೂ ಪಟ್ಟಣ ಪ್ರದೇಶದಲ್ಲೂ ಸಂಚರಿಸಿ ಸಂವಿಧಾನ ಪೀಠಿಕೆ ಮತ್ತು ಅದರಲ್ಲಿನ ಅಂಶಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ,ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಕೋಚಿಮುಲ್ ಮಾಜಿ ನಿರ್ದೇಶಕ ಪಾಳ್ಯಂಭೈರಾರೆಡ್ದಿ,ಗ್ರಾಮಪಂಚಾಯಿತಿ ಪಿಡಿಒ ಮಂಜುನಾಥ್, ಕಾರ್ಯದರ್ಶಿ ಭೈರೆಡ್ಡಿ,ದಲಿತ ಮುಖಂಡರಾದ ರಾಮಾಂಜಮ್ಮ,ಗುರುಮೂರ್ತಿ,ಸೀತಪ್ಪ, ನಾರಯಣಪುರ ವೆಂಕಟೇಶ್ ಮುಂತಾದವರು ಇದ್ದರು.